Aug 15, 2012

ಸ್ವಗತ -2

ಮತ್ತೊಂದು ಆಗಸ್ಟ್ ಹದಿನೈದು ... ಅಗೋ ಎಷ್ಟೊಂದು ಸಮಸ್ಯೆಗಳು ಇನ್ನು ಹಾಗೇ ಇವೆ...ಈಗ ಅರುವತ್ತಾರನೆಯ ಆಚರಣೆ...
ಭಾಷಣಕ್ಕೆ ಮೀಸಲಾದ ದಿನವಿದೇನೋ?...ಸಮಸ್ಯೆಗಳ ಕುರಿತು ಸಾವಿರ ಮಾತು....ಅಷ್ಟೇ ,ಮತ್ತೇನೂ ಇಲ್ಲ...ವಾಕ್ಚಾತುರ್ಯಕ್ಕೆ ಇಲ್ಲಿ ಬರವಿಲ್ಲ..ನುಡಿಯುವುದು ಮಾತ್ರ,ನಡೆಯಲ್ಲೇನೂ ಇಲ್ಲ!
ಇಲ್ಲಿ ರಾಜಕೀಯ ಬಣ್ಣ ಪಡೆವ ಹೋರಾಟಗಳು...ಜನಸೇವೆಯ ಮುಖವಾಡದ ಹೆಗ್ಗಣಗಳು...ಲೆಕ್ಕವಿಲ್ಲದಷ್ಟು ಪಕ್ಷಗಳು...ಬ್ಯುಸಿನೆಸ್ಸ್ ಆದ  ಆಡಳಿತ..ಸ್ವಜಾತಿ ಪ್ರೇಮಿಯ ಬಾಯಲ್ಲಿ ಜಾತ್ಯಾತೀತ ಜಪ!
ವರುಷಕ್ಕೊಮ್ಮೆ ಧ್ವಜ ಹಾರಿಸಿ,ಯಾರೋ ಬರೆದ ಭಾಷಣ ಓದುವ ಮಂತ್ರಿಗಳು..ಗೊಂದಲದ ಮತದಾರ!
ಕಿರಿಯರ ಶಾಲೆಗಳಲ್ಲಿ ಧ್ವಜ ಹಾರಿಸಿ ಸಂಭ್ರಮ..ಮಿಠಾಯಿ ಹಂಚಿ ಬಾಯಿ ಸಿಹಿ ಮಾಡಿ...ಭಾಷಣ,ನಾಟಕ,ಹಾಡು ಕಾರ್ಯಕ್ರಮ ದೇಶಪ್ರೇಮ ಉಕ್ಕಿಸುವ ಕೆಲಸ..
ಕಾಲೇಜು ಕಛೇರಿಗಳಿಗೆ ರಜೆ..ಅಲ್ಲಿಲ್ಲಿ ಸುತ್ತಾಟ,ಚಾರಣ,ಸಿನಿಮಾ ಮೋಜು, ಮಸ್ತಿ ಮಜಾ..ಎಲ್ಲಾ ಕೆಲಸದಿಂದ ವಿರಾಮ!
ಮಿತಿ ಮೀರಿದ ಭ್ರಷ್ಟಾಚಾರ...ಮರಿ ಹಾಕುತ್ತಿರುವ ಕಪ್ಪು ಹಣ...ಏನೇ ಆದರೂ ನೋಟಿನಲ್ಲಿ ನಗುತ್ತಿರುವ ಅಹಿಂಸಾವಾದಿ!!
ಯಾವುದೇ ವೈಯಕ್ತಿಕ ಆಸೆಗಳಿಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣತೆತ್ತ ಹುತಾತ್ಮರ ನೆನೆಯಬೇಕಾದ ದಿನದಂದು ಪ್ರತಿ ವರ್ಷ ನಾವು ಸಮಸ್ಯೆಗಳ ಬಗ್ಗೆ ಮಾತಾಡಬೇಕಾದ ದುಸ್ತಿತಿ!
ಹೀಗೆಯೇ ಯೋಚಿಸುತ್ತಾ ಹೇಳುತ್ತಿರುತ್ತೇವೆ "ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು"!!

 ಚಿತ್ರ ಕೃಪೆ:http://jaipursightseeing.com  
---------------------------------------------------------------------------------------------------------------------------------------------------------------

Aug 5, 2012

ಅವಳು ಮತ್ತು ಅವಳವನು

ನಯನದೊಳಗೆ ಅವನಿರುವನೆಂದು,
ರೆಪ್ಪೆ ಬಿಟ್ಟರೆ ಕಳೆದುಕೊಳ್ಳಬಹುದೆಂದು;
ಅವಳು ಕಣ್ಮುಚ್ಚಿದಳು.
ಅವನು,
ಕಣ್ಣ ದ್ರವದ ಜೊತೆಗೆ ಹೊರಬಂದ!
ಈಗ ಇಬ್ಬರೂ ಧ್ಯಾನಸ್ತರು,
ಅವಳು ಗೋರಿಯೊಳಗೆ;
ಅವನು ಹೊರಗೆ!

Jul 14, 2012

ಮಳೆ ಬರಬೇಕು..

ಮತ್ತೆ ಮಳೆ ಬರಬೇಕು, ಮನಸು ಬಯಸಿದೆ;
ನಾವಿನ್ನೂ ನೆನೆಯಬೇಕು,ಅದೇನೋ ಸೊಗಸಿದೆ.
ಹಳೆಯ ಮರೆತ..ಮಳೆಯ ಕುರಿತ..ಹಾಡು ಗುನುಗುತಾ;
ಬೀಳೋ ಹನಿಯ..ಕೇಳೋ ದನಿಯ..ಜೊತೆಗೆ ಸವಿಯುತಾ....ಸಾಗಲೂ... ////

ಚಿವುಟಿ ದೂರ ಕೂತ ನಿನಗೆ ಅದೇನು ಕೋಪ ನನ್ನಲಿ,
ನಗಲು ಮತ್ತೆ ಮೂಡಿತಲ್ಲ ಕೆನ್ನೆ ಮೇಲೆ ಸಣ್ಣಗುಳಿ.
ಕನಸ ಕಡಲ ಕಡೆಗಿನ ಕಾಲುದಾರಿ ..ಹಸಿರಾಗಿ ಹೊಸದಾಗಿದೆ,
ಒಡಮೂಡಿ ಪ್ರೀತಿ!!
ಮನಮೋಹಕ ಮುಗುಳುನಗೆಗೆ ಮನಸೋತು ..ಬಾಳು ಹಸನಾಗಿದೆ,
ಬದಲಾಯಿತು ಗತಿ! ////

ಮುಂಗಾರ ಮೊದಲ ಮಳೆಯನು ನೋಡಲು ಭಾವನೆಗಳು,
ಇಣುಕಿವೆ ಹಿಡಿದು ಮನದ ಮನೆಯ ಕಿಟಕಿ ಸರಳು .
ಕೋಟಿಹನಿಗಳಿಂದ ಆರಿಸಿ ಒಂದನು..ಮುತ್ತಾಗಿಸುವ ಆಸೆಯಲ್ಲಿ,
ಚಿಪ್ಪು ಈಗ!!
ಕಣ್ಣ ಹನಿಯೊಂದು ಓಡಿ ಹೊರಬಂದು.. ನಿಂತಿತು ರೆಪ್ಪೆಯಲ್ಲಿ,
ನಾವಪ್ಪುವಾಗ! ////!

------------------------------------------------------------------------------------------------------------------------

ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)...  

Jul 6, 2012

ಸ್ವಗತ -1

ಕವಿ ಅಥವಾ ಲೇಖಕ ಅವನವನ ಧಾಟಿಯಲ್ಲೇ ಯೋಚಿಸುತ್ತಾನೆ, ಅಂತೆಯೇ ಬರೆಯುತ್ತಾನೆ, ಅದು ಕೆಲವರಿಗೆ 'ಕಾಲಹರಣ' ಎಂದೆನಿಸಿ ಗೊಣಗಬಹುದು, ಕೆಲವರಿಗೆ 'ತಮಾಷೆ' ಎಂದೆನಿಸಿ ಅಪಹಾಸ್ಯ ಮಾಡಬಹುದು.ಎಲ್ಲರ ದೃಷ್ಟಿಕೋನಗಳು ಬೇರೆ ಬೇರೆಯಾಗಿರುತ್ತವೆ ;ಬರೆದುದನ್ನು ಯಾರೂ ಓದುವುದಿಲ್ಲ ಅಥವಾ ಯಾರಾದರೂ ತಮಾಷೆ ಮಾಡುತ್ತಾರೆ ಎಂದೆಲ್ಲಾ ಅನ್ನಿಸತೊಡಗಿದರೆ ಬರೆಯಲು ಆಸಕ್ತಿಯೇ ಇರುವುದಿಲ್ಲ.ಅಕ್ಷರಮೋಹಿಯಾಗಿ,ಪದಗಳ ಒಲವನ್ನು ಸಂಪಾದಿಸಿ,ಆತ್ಮತೃಪ್ತಿಗಾಗಿ ಬರೆಯುವುದನ್ನು ವಾಡಿಕೆ ಮಾಡಿಕೊಂಡರೆ ಬರೆದ ಎಲ್ಲಾ ಸಾಲುಗಳಲ್ಲೂ ಅತೀವ ಆನಂದ ದೊರೆಯುತ್ತದೆ. ನಮಗೆ ನಿರಂತರ ನೆಮ್ಮದಿ ನೀಡುವುದು ನಮ್ಮತನ ಮಾತ್ರ!
-----------------------------------------------------------------------------------------------------------------------------------------------------
ಕನ್ನಡ ಬ್ಲಾಗ್ ಪುಟದಲ್ಲಿ....(comments @KANNADA BLOG- facebook page)...

Jun 23, 2012

ಕವಿಯಾಗಲು..

ಪದಗಳ್ಯಾವುದೂ ಎಂದಿಗೂ ಯಾರದ್ದೋ ಸ್ವಂತಾಸ್ತಿ ಅಲ್ಲ,
ಶೈಲಿಯನುಕರಣೆ ತಪ್ಪಲ್ಲ!
ಯೋಚಿಸಿ ಯೋಜಿಸಿ ಬರೆಯಬೇಕು,ಕೃತಿ ಚೌರ್ಯ ಸಲ್ಲ;  
ಕದ್ದವನೆಂದೂ  ಕವಿಯಾಗಲ್ಲ!

ಬೆದರಿ ಬೆಳಕಿಗೆ,
ಕತ್ತಲಲ್ಲೇ ಕಳ್ಳನ ಬರವಣಿಗೆ!
ಅಲ್ಲೇ ಇರುವುದದು ,
ಬೆಳಕಿನಲಿ ಭೂತಕನ್ನಡಿ ಸುಡುವುದು!

ಭಾವನೆಗಳು ಬೇಕು,
ಧಾವಿಸಿ ಅವುಗಳನನುಸರಿಸಬೇಕು!
ಕಲ್ಪನೆ ಇರಬೇಕು,
ಕೊಂಚ ಅಂತೆಯೇ ಬರೆಯಬೇಕು!

ಸ್ವಂತಿಕೆಯಿರಬೇಕು,
ಕಾವ್ಯ ಶೀಮಂತಿಕೆಯಿರಬೇಕು!
ಮಂತ್ರಿಸುವುದದು,
ಒಮ್ಮೆ ಓದಿರೆಂದು ಆಮಂತ್ರಿಸುವುದದು!
--------------------------------------------------------------------------------------------------------------------------
 ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)... 

Jun 16, 2012

ವಿಪರ್ಯಾಸ

         1
ಎದ್ದು ಕುಳಿತೆ ಹರುಷದಲ್ಲಿ,
ಚಂದದೊಂದು ಕನಸ ಕಂಡು;
ಅಂದುಕೊಂಡೆ ಬದುಕಿನಲ್ಲಿ,
ಇಂಥದೊಂದು ಘಟಿಸಲೆಂದು!
           2
ಬಾನಾಡಿಯಾಗಿ ಖುಷಿಯಲ್ಲಿ,
ಹಾರುತ್ತಿರಲು ಅತಿ ಹಿತವಾಯಿತು;
ಕಾರಣ ಹುಡುಕುವುದು ಎಲ್ಲಿ,
ಹೇಗೋ ಕನಸು ಕವಲೊಡೆಯಿತು!
            3
ಮೋಡದ ಮರೆಯಲ್ಲೊಂದು,
ಮರೆಯಾಗಿ ಹೋಯಿತು;
ಬಿಸಿಲಿನತ್ತ ಬಾಗಿ ಇನ್ನೊಂದು,
ಬಸವಳಿದು ಬಾಡಿ ಹೋಯಿತು!
----------------------------------------------------------------

May 26, 2012

ವಿರಹ...ಹೃದಯದ ಹೊರಳಾಟ!

ಪ್ರೇಮವಂಚಿತ ಹುಡುಗಿ ,ವಿಧಿಯನ್ನು ಶಪಿಸುತ್ತಾ ಹೇಳಿದ ಅವಳ ಜೀವನದ ಕಥೆಯ ಕವನವಿದು!
--------------------------------------------------------------------------------------------


ಮೃದುಲ ಹೃದಯದ ಮೇಲೆ,ಚೂಪಾದ ಉಗುರಿನ ಗೀರು,
ಹುಚ್ಚು ಪ್ರೀತಿಯಿಂದ;
ಮಾಸದ ಗಾಯದ ಮೇಲೆ, ಸುರಿದಂತೆ ಉಪ್ಪಿನ ನೀರು..
ನೆನಪ ನೋವಿನಿಂದ!     ||ಪ||

ವಿಷಗಾಳಿಯ ಉಸಿರಾಟ,
ಧರೆಗುರುಳಿ ಧಗಧಗನೆ,
ಹೊತ್ತಿ ಉರಿಯುತಿದೆ ಕನಸ ಗೋಪುರ.
ಒಂದೆಂಬ ಬಂಧವನು ವಿಧಿ ಹಾಳುಮಾಡಿ,
ರಮಿಸುತಿದೆ ಕಣ್ಣೀರಿನಲ್ಲೇ ಸ್ನಾನ ಮಾಡಿ!  || ೧||

ವಿಷಮ ಪ್ರೀತಿಯಾಟ,
ಮರುಕದಲಿ ಮನಸಿನಲಿ,
ತುಂಬಿ ಹರಿಯುತಿದೆ ದುಃಖದ ಸಾಗರ.
ಶೋಕಲೋಕದಲ್ಲಿ ಏಕಾಂಗಿ ಪಯಣ,
ದಾರುಣ ಕೊನೆಯ ಕಥೆಯಿದು ಜೀವನ!   ||೨||












  ಚಿತ್ರ ಕೃಪೆ :www.wallpaperhere.com

 -------------------------------------------------------------------------------------------------------