Jan 2, 2011

ಹರುಷಕ್ಕೆ...ಹಾರೈಕೆ


ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಷಯಗಳು...ಎಲ್ಲರ ಹೊಸ ಯೋಚನೆ,ಯೋಜನೆಗಳು ಸಫಲವಾಗಲಿ.
"-ಕನಸು" ಕನ್ನಡ ಪತ್ರಿಕೆಯಲ್ಲಿ ಪ್ರಕಟವಾದ ಹೊಸವರ್ಷದ ಕುರಿತ ನನ್ನ ಲೇಖನ ಇಲ್ಲಿದೆ..
------------------------------------------------------------------------------------------
ಕ್ಯಾಲೆಂಡರ್ ಬದಲಿಸುವ ಸಮಯ ಮತ್ತೆ ಬಂದಿದೆ...ಜನವರಿ 2011!!
ಅಂತೂ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ..
ಮೊನ್ನೆ ಮೊನ್ನೆ ಶುರುವಾಗಿದ್ದು ಅಲ್ವಾ ಅಂತ ಅನಿಸುವ 2010ರಲ್ಲಿ ಒಂದಷ್ಟು ಒಳ್ಳೆಯದು...ಹಾಗೂ ಇನ್ನೊಂದಿಷ್ಟು ಘಟಿಸಬಾರದಂತಹ ಘಟನೆಗಳು ಆಗಿ ಹೋಗಿವೆ.ವಾರದಿಂದೀಚೆಗೆ ದಿನ ಪತ್ರಿಕೆಗಳಲ್ಲಿ ,ಟಿ.ವಿ.ಮಾಧ್ಯಮಗಳಲ್ಲಿ ಇವುಗಳ ವಿಮರ್ಶೆ ಆಗಿದೆ..ಆಗುತ್ತಿದೆ.ತನ್ನ ಅಪರಿಮಿತ ಬುದ್ಧಿಶಕ್ತಿಯಿಂದಾಗಿ ಆದಿಮಾನವ ಸ್ಥಿತಿಯಿಂದ ಕಂಪ್ಯೂಟರ್ ಯುಗದಲ್ಲಿರುವ ನಾವು,ಇಡೀ ವಿಶ್ವವೇ ಬೆರಳ ತುದಿಯಲ್ಲಿ ಎನ್ನುವ ಈ ಸ್ತಿತಿ ತಲುಪಿರುವ ನಾವು,ಈ ನಡುವೆ ಇಂತಹ ಸಹಸ್ರಾರು ವರ್ಷಗಳನ್ನೇ ದಾಟಿ ಬಂದಿದ್ದೇವೆ.ಇಂದು ಇಂದೆನ್ನುವ ಈ 'ಇಂದು' ನಾಳೆ 'ನಿನ್ನೆ'ಯಾಗುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ.
ಹೆಸರಿಲ್ಲದೆ ಹುಟ್ಟುವಲ್ಲಿಂದ,ಆ ಹಸುಗೂಸಿನ ಸ್ತಿತಿಯಿಂದ ನಾವು,ನಮ್ಮ ವ್ಯಕ್ತಿತ್ವ ಬೆಳೆಯುತ್ತ ಹೋಗುತ್ತದೆ;ಅನೇಕ ಘಟನೆಗಳು,ವಿಚಾರಗಳು,  ಅನುಭವಗಳನ್ನು ಮನಸ್ಸಿನಲ್ಲಿ ಮುದ್ರಿಸಿಕೊಂಡಿರುತ್ತೇವೆ ನಿಜ-ಆದರೆ ಮನಸ್ಸಿನ ಅಂತರ್ಯದಲ್ಲಿ ನಿಕ್ಷಿಪ್ತವಾಗಿರುವ ಇಂತಹ ವಿಚಾರ,ಅನುಭವಗಳಿಂದ ನಾವು ಕಲಿತಿರುವುದು ಏನು ಎಂಬುದು ಪ್ರಮುಖ ವಿಷಯ!!ಪುಣ್ಯವೋ ಪಾಪವೋ ಗೊತ್ತಿಲ್ಲ ...ಅಂತೂ ಈ ಭೂಮಿ ಮೇಲೆ ಹುಟ್ಟಿದ್ದೇವೆ,ಸಮಯದ ಉರುಳುವಿಕೆಯಲ್ಲಿ ಬದುಕು ಕಟ್ಟಿಕೊಳ್ಳುವುದು,ಕನಸನ್ನು ನಿಜಮಾಡಿಕೊಳ್ಳುವುದು ಹೀಗೆ ಅನೇಕ ಅಗತ್ಯಗಳನ್ನು ಪೂರೈಸುವಾಗ ಶಾಲೆ,ಕಾಲೇಜು, ಉದ್ಯೋಗ,ಸಂಸಾರ ಎನ್ನುತ್ತಾ ದಿನ ಕಳೆಯುತ್ತದೆ.ಒಂದು ದಿನ ಬದುಕೇ ಮುಗಿದು ಹೋಗುತ್ತದೆ!ವೇಗದ ಜಗತ್ತಿನಲ್ಲಿರುವ ನಾವು ಸಾಮರ್ಥ್ಯ ಕಡಿಮೆಯಾಗುವುದೋ,ಆರೋಗ್ಯ ಕುಗ್ಗುವುದೋ,ಅಸಹಾಯಕನೆನಿಸಿಕೊಳ್ಳುತ್ತೇನೋ,ಅಂದುಕೊಂಡಿದ್ದನ್ನು ಸಾಧಿಸುತ್ತೇನೋ ಇಲ್ಲವೋ ಎಂಬ ಋಣಾತ್ಮಕ ಅಂಶಗಳನ್ನು ‘ಇಲ್ಲ ಹಾಗಾಗದಂತೆ ನಡೆದುಕೊಳ್ಳಬೇಕು..’ಎಲ್ಲ ಕ್ಷಣಗಳನ್ನು ಶುಭವೆಂದು ಖುಷಿಯಿಂದ ಅನುಭವಿಸಬೇಕೆಂಬ ಧನಾತ್ಮಕ ಚಿಂತನೆ ಅದ್ಭುತ...ಅಲ್ವಾ? ಹೊಸವರ್ಷದಲ್ಲಿ ಆ ಖುಷಿ ಎಲ್ಲರದಾಗಲಿ!

ಅಂದುಕೊಂಡಂತೆ ನಡೆದರೆ ಅದು ಪ್ರತಿಭೆ,ಕಷ್ಟದ ಫಲ ಎಂದೂ,ಇರದಿದ್ದರೆ ನಮ್ಮ ವಿಧಿಯೆಂದೂ ಭಾವಿಸುವುದು ನಮಗೆ ಹವ್ಯಾಸವಾಗಿದೆ.ಆದರೆ ನಾವು ನೆನಪಿಟ್ಟುಕೊಳ್ಳಬೇಕಾದ ಒಂದು ವಿಚಾರವೆಂದರೆ ‘ಸ್ವನಿಂದೆ ಮತ್ತು ಸ್ವಪ್ರಶಂಸೆ’ ಇವೆರಡೂ ಕೆಲಸಕ್ಕೆ ಬಾರದವು ಎಂಬುದು.ನಾವು ಪ್ರಾವಿಣ್ಯಯನ್ನು ಪಡೆದಿರುವ ಕ್ಷೇತ್ರವನ್ನು ಅಥವಾ ನಮ್ಮೆಲ್ಲರಲ್ಲೂ ಅಡಕವಾಗಿರುವ ಅಗಾಧ ಪ್ರತಿಭೆಯಿಂದ ನಾವು ಸಾಧಿಸಬಹುದು ಎನ್ನುವ ಕೆಲಸಕಾರ್ಯಗಳನ್ನು ಮಾಡುವುದರಿಂದ ಸಂತೃಪ್ತಿ ಪಡೆಯಬಹುದು ...ಅಲ್ವಾ!?ಹೊಸವರ್ಷದಲ್ಲಿ ಆ ಸಂತೃಪ್ತಿ ಎಲ್ಲರದಾಗಲಿ!!

ನಮ್ಮ ಕೈಯಲ್ಲಿಲ್ಲ ,ಕಳೆದರೆ ಮತ್ತೆ ಸಿಗುವುದಿಲ್ಲ ಎಂದು ನಾವು ಕರೆಯುವ ಈ 'ಸಮಯ' ಎನ್ನುವುದಿದೆಯಲ್ಲ ಇದು ಬದಲಾಗು ವಂತದ್ದು ಎಂಬುದರ ಅರಿವು ನಮಗಿದೆ ಸರಿ-ಬದಲಾಗುವ ಸಮಯ/ಕಾಲದಲ್ಲಿ ಸಮಸ್ಯೆ ಎಂಬುದು ಶಾಶ್ವತವಲ್ಲ ಎಂದು ಮನವರಿಕೆಯಾದರೆ ಜೀವನದಲ್ಲಿ ಎಷ್ಟೊಂದು ನೆಮ್ಮದಿ ಅಲ್ವಾ...?ಆ ನೆಮ್ಮದಿ ಎಲ್ಲರದಾಗಲಿ !!

ಬಹುಸುಂದರ ಗುಲಾಬಿ ಹೂವು ಇರುವುದು ಮುಳ್ಳಿನ ಗಿಡದಲ್ಲಿ!ನಮ್ಮಲ್ಲಿ ಕೆಲವರು ಆ ಹೂವಿನ ಸೌಂದರ್ಯವನ್ನು ಆಸ್ವಾದಿಸಿದರೆ ,ಇನ್ನು ಕೆಲವರು ಮುಳ್ಳಿನ ಬಗ್ಗೆಯೇ ಯೋಚಿಸುತ್ತಾರೆ.ಹೀಗೆ ಒಂದೇ ವಿಷಯದ ಬಗ್ಗೆ ನಾವು  ಆಲೋಚನೆಗೆ ಅನುಗುಣವಾಗಿ ಸ್ಪಂದಿಸುವ ರೀತಿಯೇ ಎಷ್ಟೊಂದು ವಿಚಿತ್ರ.ಹೀಗೆ ದುಷ್ಟ ಯೋಚನೆಗಳಿಂದ, ಭಯ+ಉತ್ಪಾದನೆಗಳಿಂದ, ರಕ್ತಹೀರಿ,ಅಮಾನುಷವಾಗಿ ಬದುಕಬೇಕೆನ್ನುವವರಿಗೆಲ್ಲ ಆ ದೇವರು ಸದ್ಭುದ್ದಿ ನೀಡಿ,ಅದರಿಂದ ಸಾಧಿಸುವುದು ಏನೂ ಇಲ್ಲ ಎಂಬುದು ಅವರಿಗೆ ಮನದಟ್ಟಾಗಿ,ಅವರ ಪ್ರಜ್ಞೆಯನ್ನು ಕೆದಕಿ ಅವರೂ ಉತ್ತಮರಾಗಲಿ..ಹೊಸವರ್ಷ ವಿಶ್ವದೆಲ್ಲೆಡೆ ಶಾಂತಿ ತುಂಬಿರಲಿ!

ನಗು ದೇವರು ನಮಗೆ ಕೊಟ್ಟಿರುವ ಅತ್ಯದ್ಭುತ ವರ! ವೃತ್ತಿಪರ ಒತ್ತಡಗಳಿಂದ ನಗು ಬಹುತೇಕ ಕಾಣೆಯಾಗಿವುದು ನಿಜ.ಆದರೆ ನಮಗೆಲ್ಲ ಆರೋಗ್ಯಕರ ನಗು ಆರೋಗ್ಯಕ್ಕೆ ಸಹಕಾರಿ! ಕಲ್ಮಶವಿಲ್ಲದ ನಗು ಮುಖದಲ್ಲಿ ಅಂದ ಆನಂದವಾಗಿ ಅರಳಿ ಹೊಳೆಯುತ್ತದೆ,ಅದಕ್ಕೆ ನಗು ಸೌಂದರ್ಯವನ್ನು ಹೆಚ್ಚ್ಚಿಸುತ್ತದೆ ಎನ್ನುವುದು ಏನೋ?ಹೊಸವರ್ಷ ನಗುವಿನಿಂದ ತುಂಬಿರಲಿ,ಆ ನಗು ಇನ್ನೊಬ್ಬರ ನೋವಿಗೆ ಕಾರಣವಾಗದಿರಲಿ...ನಗು ಸ್ವಚ್ಚವಾಗಿರಲಿ !!

ಹಣಕ್ಕೆ ಹಣವನ್ನು ಸಂಪಾದಿಸುವ ಗುಣವಿದೆ...ಉಪಯೋಗಿಸುವ ವಿಧಾನ ಹಾಗೂ ಉಳಿಸಿಕೊಂಡದ್ದು ಮಹತ್ವವನ್ನು ಪಡೆದುಕೊಳ್ಳುತ್ತದೆ,ಬರೀ ಗಳಿಸಿದ್ದಷ್ಟೇ ಅಲ್ಲ !ಹಾಗೆಯೇ ಸ್ನೇಹಕ್ಕೆ,ಪ್ರೀತಿಗೆ ಅನೇಕರನ್ನು ಸಂಪಾದಿಸುವ ಗುಣವಿದೆ,ಬರೀ ಸಂಖ್ಯೆಯ ಲೆಕ್ಕಚಾರವಾಗಿರದೆ..ಎಲ್ಲರಿಗೂ ಒಳ್ಳೆಯ ಸ್ನೇಹಿತರು ಸಿಗಲಿ!!

ಹೊಸ ವರುಷ ಹರುಷವನ್ನು ತರಲಿಯೆಂದು ಪ್ರತಿ ವರ್ಷ ಮಾಡುವ ಶುಭಾಶಯಗಳು ಬರೀ ಶುಭಾಶಯದ ಮಾತುಗಳಷ್ಟೇ ಆಗದಿರಲಿ !!
2011 ಎಲ್ಲರಿಗೂ ಖುಷಿ,ಸಂತೃಪ್ತಿ,ನೆಮ್ಮದಿಯನ್ನು ತರಲಿ....ಒಳಿತಾಗಲಿ ಶುಭವಾಗಲಿ ಎಂಬ ಶುಭ ಹಾರೈಕೆಯೊಂದಿಗೆ ನಾವೆಲ್ಲಾ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸೋಣ..ಅರ್ಥಪೂರ್ಣವಾಗಿಸೋಣ...



---ವಿನೋದ್ ರೈ ,ಕರ್ಮಾಯಿ 
------------------------------------------------------------------------------------------