Jun 23, 2012

ಕವಿಯಾಗಲು..

ಪದಗಳ್ಯಾವುದೂ ಎಂದಿಗೂ ಯಾರದ್ದೋ ಸ್ವಂತಾಸ್ತಿ ಅಲ್ಲ,
ಶೈಲಿಯನುಕರಣೆ ತಪ್ಪಲ್ಲ!
ಯೋಚಿಸಿ ಯೋಜಿಸಿ ಬರೆಯಬೇಕು,ಕೃತಿ ಚೌರ್ಯ ಸಲ್ಲ;  
ಕದ್ದವನೆಂದೂ  ಕವಿಯಾಗಲ್ಲ!

ಬೆದರಿ ಬೆಳಕಿಗೆ,
ಕತ್ತಲಲ್ಲೇ ಕಳ್ಳನ ಬರವಣಿಗೆ!
ಅಲ್ಲೇ ಇರುವುದದು ,
ಬೆಳಕಿನಲಿ ಭೂತಕನ್ನಡಿ ಸುಡುವುದು!

ಭಾವನೆಗಳು ಬೇಕು,
ಧಾವಿಸಿ ಅವುಗಳನನುಸರಿಸಬೇಕು!
ಕಲ್ಪನೆ ಇರಬೇಕು,
ಕೊಂಚ ಅಂತೆಯೇ ಬರೆಯಬೇಕು!

ಸ್ವಂತಿಕೆಯಿರಬೇಕು,
ಕಾವ್ಯ ಶೀಮಂತಿಕೆಯಿರಬೇಕು!
ಮಂತ್ರಿಸುವುದದು,
ಒಮ್ಮೆ ಓದಿರೆಂದು ಆಮಂತ್ರಿಸುವುದದು!
--------------------------------------------------------------------------------------------------------------------------
 ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)... 

Jun 16, 2012

ವಿಪರ್ಯಾಸ

         1
ಎದ್ದು ಕುಳಿತೆ ಹರುಷದಲ್ಲಿ,
ಚಂದದೊಂದು ಕನಸ ಕಂಡು;
ಅಂದುಕೊಂಡೆ ಬದುಕಿನಲ್ಲಿ,
ಇಂಥದೊಂದು ಘಟಿಸಲೆಂದು!
           2
ಬಾನಾಡಿಯಾಗಿ ಖುಷಿಯಲ್ಲಿ,
ಹಾರುತ್ತಿರಲು ಅತಿ ಹಿತವಾಯಿತು;
ಕಾರಣ ಹುಡುಕುವುದು ಎಲ್ಲಿ,
ಹೇಗೋ ಕನಸು ಕವಲೊಡೆಯಿತು!
            3
ಮೋಡದ ಮರೆಯಲ್ಲೊಂದು,
ಮರೆಯಾಗಿ ಹೋಯಿತು;
ಬಿಸಿಲಿನತ್ತ ಬಾಗಿ ಇನ್ನೊಂದು,
ಬಸವಳಿದು ಬಾಡಿ ಹೋಯಿತು!
----------------------------------------------------------------