Jul 14, 2012

ಮಳೆ ಬರಬೇಕು..

ಮತ್ತೆ ಮಳೆ ಬರಬೇಕು, ಮನಸು ಬಯಸಿದೆ;
ನಾವಿನ್ನೂ ನೆನೆಯಬೇಕು,ಅದೇನೋ ಸೊಗಸಿದೆ.
ಹಳೆಯ ಮರೆತ..ಮಳೆಯ ಕುರಿತ..ಹಾಡು ಗುನುಗುತಾ;
ಬೀಳೋ ಹನಿಯ..ಕೇಳೋ ದನಿಯ..ಜೊತೆಗೆ ಸವಿಯುತಾ....ಸಾಗಲೂ... ////

ಚಿವುಟಿ ದೂರ ಕೂತ ನಿನಗೆ ಅದೇನು ಕೋಪ ನನ್ನಲಿ,
ನಗಲು ಮತ್ತೆ ಮೂಡಿತಲ್ಲ ಕೆನ್ನೆ ಮೇಲೆ ಸಣ್ಣಗುಳಿ.
ಕನಸ ಕಡಲ ಕಡೆಗಿನ ಕಾಲುದಾರಿ ..ಹಸಿರಾಗಿ ಹೊಸದಾಗಿದೆ,
ಒಡಮೂಡಿ ಪ್ರೀತಿ!!
ಮನಮೋಹಕ ಮುಗುಳುನಗೆಗೆ ಮನಸೋತು ..ಬಾಳು ಹಸನಾಗಿದೆ,
ಬದಲಾಯಿತು ಗತಿ! ////

ಮುಂಗಾರ ಮೊದಲ ಮಳೆಯನು ನೋಡಲು ಭಾವನೆಗಳು,
ಇಣುಕಿವೆ ಹಿಡಿದು ಮನದ ಮನೆಯ ಕಿಟಕಿ ಸರಳು .
ಕೋಟಿಹನಿಗಳಿಂದ ಆರಿಸಿ ಒಂದನು..ಮುತ್ತಾಗಿಸುವ ಆಸೆಯಲ್ಲಿ,
ಚಿಪ್ಪು ಈಗ!!
ಕಣ್ಣ ಹನಿಯೊಂದು ಓಡಿ ಹೊರಬಂದು.. ನಿಂತಿತು ರೆಪ್ಪೆಯಲ್ಲಿ,
ನಾವಪ್ಪುವಾಗ! ////!

------------------------------------------------------------------------------------------------------------------------

ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)...  

Jul 6, 2012

ಸ್ವಗತ -1

ಕವಿ ಅಥವಾ ಲೇಖಕ ಅವನವನ ಧಾಟಿಯಲ್ಲೇ ಯೋಚಿಸುತ್ತಾನೆ, ಅಂತೆಯೇ ಬರೆಯುತ್ತಾನೆ, ಅದು ಕೆಲವರಿಗೆ 'ಕಾಲಹರಣ' ಎಂದೆನಿಸಿ ಗೊಣಗಬಹುದು, ಕೆಲವರಿಗೆ 'ತಮಾಷೆ' ಎಂದೆನಿಸಿ ಅಪಹಾಸ್ಯ ಮಾಡಬಹುದು.ಎಲ್ಲರ ದೃಷ್ಟಿಕೋನಗಳು ಬೇರೆ ಬೇರೆಯಾಗಿರುತ್ತವೆ ;ಬರೆದುದನ್ನು ಯಾರೂ ಓದುವುದಿಲ್ಲ ಅಥವಾ ಯಾರಾದರೂ ತಮಾಷೆ ಮಾಡುತ್ತಾರೆ ಎಂದೆಲ್ಲಾ ಅನ್ನಿಸತೊಡಗಿದರೆ ಬರೆಯಲು ಆಸಕ್ತಿಯೇ ಇರುವುದಿಲ್ಲ.ಅಕ್ಷರಮೋಹಿಯಾಗಿ,ಪದಗಳ ಒಲವನ್ನು ಸಂಪಾದಿಸಿ,ಆತ್ಮತೃಪ್ತಿಗಾಗಿ ಬರೆಯುವುದನ್ನು ವಾಡಿಕೆ ಮಾಡಿಕೊಂಡರೆ ಬರೆದ ಎಲ್ಲಾ ಸಾಲುಗಳಲ್ಲೂ ಅತೀವ ಆನಂದ ದೊರೆಯುತ್ತದೆ. ನಮಗೆ ನಿರಂತರ ನೆಮ್ಮದಿ ನೀಡುವುದು ನಮ್ಮತನ ಮಾತ್ರ!
-----------------------------------------------------------------------------------------------------------------------------------------------------
ಕನ್ನಡ ಬ್ಲಾಗ್ ಪುಟದಲ್ಲಿ....(comments @KANNADA BLOG- facebook page)...